ಭಾರತೀಯ ವಾಯುಬಲ

	ಒಂದು ಸ್ವತಂತ್ರ, ಸಾರ್ವಭೌಮ ರಾಷ್ಟ್ರದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೆ ಸಶಸ್ತ್ರ ಪಡೆಗಳ ಅಗತ್ಯವನ್ನು ಒತ್ತಿ ಹೇಳಬೇಕಾಗಿಲ್ಲ. ಭಾರತದ ಭೂ ಪ್ರದೇಶ, ಜಲ ಪ್ರದೇಶ ಮತ್ತು ವಾಯು ಪ್ರದೇಶವನ್ನು ಕ್ರಮವಾಗಿ ಸೇನಾಬಲ, ನೌಕಾಬಲ ಮತ್ತು ವಾಯು ಬಲಗಳು ಸಮರ್ಥವಾಗಿ ರಕ್ಷಿಸುತ್ತಿದೆ. ಸೇನಾ ಬಲ ಮತ್ತು ನೌಕಾಬಲ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದರೂ, ವಾಯುಬಲದ ಇತಿಹಾಸ ಇತ್ತೀಚಿನದು. 

	ವಿಮಾನಗಳನ್ನು ದಾಳಿಯ ಉದ್ದೇಶಕ್ಕಾಗಿ ಮೊದಲ ಬಾರಿಗೆ ಬಳಸಿದ್ದು, 1914-1918 ರ ಮೊದಲ ವಿಶ್ವಯುದ್ಧದಲ್ಲಿ. ಆ ಯುದ್ಧದಲ್ಲಿ ಭಾರತದ ನಾಲ್ವರು ತರುಣ ವಿಮಾನ ಚಾಲಕರು ತಮ್ಮ ಧೈರ್ಯ ಸಾಹಸಗಳನ್ನು ಮೆರೆದಿದ್ದರು.

ಭಾರತೀಯ ವಾಯುಬಲ ಜನನ.

ಇಂಗ್ಲೆಂಡ್‍ನ ವಾಯುಬಲವಾದ ರಾಯಲ್ ಏರ್‍ಫೋರ್ಸ್‍ನ ರೀತಿಯಲ್ಲಿ ಭಾರತೀಯ ವಾಯುಬಲವನ್ನು ಸ್ಥಾಪಿಸುವ ಬಗ್ಗೆ ಶಿಫಾರಸ್ಸು ಮಾಡಲು ಆಗಿನ ಬ್ರಿಟಿಷ್ ಸರ್ಕಾರ ಲೆಪ್ಟಿನೆಂಟ್ ಜನರಲ್ ಆಂಡ್ರೋ ಸ್ಕೀನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಸಮಿತಿಯ ಶಿಫಾರಸ್ಸುಗಳ ಮೇರೆಗೆ ಆರು ತರುಣ ಭಾರತೀಯರನ್ನು ವಿಮಾನ ಚಾಲನ ತರಬೇತಿಗಾಗಿ ಇಂಗ್ಲೆಂಡ್‍ನ ಕ್ರಾನ್‍ವೆಲ್‍ಗೆ ಕಳಿಸಲಾಯಿತು. ಹೆಚ್.ಸಿ. ಸರ್ಕಾರ್, ಎಸ್.ಮುಖರ್ಜಿ, ಎ.ಬಿ.ಅವಾನ್, ಭೂಪೇಂದ್ರ ಸಿಂಗ್, ಅಮರಜಿತ್ ಸಿಂಗ್, ಮತ್ತು ಟಿ.ಎನ್ ಟಂಡನ್ ಭಾರತೀಯ ವಾಯು ಬಲದ ಈ ಆರು ಪ್ರವರ್ತಕರಾಗಿದ್ದರು. ಬ್ರಿಟನ್‍ನ ಸಂಸತ್ತು ಅಂಗೀಕರಿಸಿದ ಭಾರತೀಯ ವಾಯು ಬಲ ಕಾಯಿದೆ 1932 ರಂದು ಜಾರಿಗೆ ಬಂದಿತು. ಅಂದೇ ಭಾರತದ ಆರು ತರುಣ ವಿಮಾನ ಚಾಲಕರು ತಮ್ಮ ಹುದ್ದೆಗಳನ್ನು ವಿದ್ಯುಕ್ತವಾಗಿ ಪಡೆದರು. ನಂತರದ ವರ್ಷಗಳಲ್ಲಿ ಇನ್ನೂ 9 ಭಾರತೀಯರನ್ನು ಕ್ರಾನ್‍ವೆಲ್‍ನಲ್ಲಿ ವಿಮಾನ ಚಾಲನೆಯಲ್ಲಿ ತರಬೇತಿ ಪಡೆಯಲು ಆಯ್ಕೆ ಮಾಡಲಾಯಿತು. ಅವರುಗಳೆಂದರೆ ಮಜುಂದಾರ್, ರಂಗನಾಥ್, ಪ್ರಥಿಪಾಲ್ ಸಿಂಗ್, ನರೇಂದ್ರ, ಹಬೀಬುಲ್ಲಾ ಖಾನ್, ಮೆಹರ್ ಸಿಂಗ್, ಆರ್.ಹೆಚ್.ಡಿ ಸಿಂಗ್, ಸುರೇಂದ್ರನಾಥ್ ಗೋಯಲ್ ಮತ್ತು ಅರ್ಜುನ್ ಸಿಂಗ್. ನಂತರದ ವರ್ಷಗಳಲ್ಲಿ ಇನ್ನೂ 13 ಭಾರತೀಯರನ್ನು ವಿಮಾನ ಚಾಲನದ ತರಬೇತಿಗೆ ಕಳಿಸಲಾಯಿತು. ರೈಲ್ವೇ ವರ್ಕ್‍ಷಾಪ್‍ಗಳಲ್ಲಿ ಸಾಕಷ್ಟು ಅನುಭವವಿದ್ದ 29 ತಂತ್ರಜ್ಞರನ್ನು ತಾಂತ್ರಿಕ ಅಭ್ಯಾಸಿಗಳನ್ನಾಗಿ ನೇಮಕ ಮಾಡಲಾಯಿತು. ಅವರಿಗೆ ಹವಾಯಿ ಸಿಪಾಯಿ ಎಂದು ಹೆಸರಿಡಲಾಯಿತು. 

	ಭಾರತೀಯ ವಾಯುಬಲದ ಮೊದಲಿನೆಯ ವಿಭಾಗ ಎ ವಿಭಾಗವನ್ನು ಕರಾಚಿಯ ಡ್ರಿಗ್ಸ್ ರಸ್ತೆಯಲ್ಲಿನ ರಾಯಲ್ ಏರ್ ಫೋರ್ಸ್ ಕೇಂದ್ರದಲ್ಲಿ 1933 ಏಪ್ರಿಲ್ ಒಂದರಂದು ಅಧಿಕೃತವಾಗಿ ರಚಿಸಲಾಯಿತು. ಪ್ರಾರಂಭಿಕ ವರ್ಷಗಳಲ್ಲಿ ಈ ದಿನವನ್ನು ವಾಯುಬಲದ ಜನ್ಮದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ ಇದನ್ನು ನಂತರ ಅಕ್ಟೋಬರ್ 8ಕ್ಕೆ ಬದಲಾಯಿಸಲಾಯಿತು. ಏಕೆಂದರೆ ಆ ದಿನ ಭಾರತೀಯ ವಾಯು ಬಲದ ಕಾಯಿದೆ ಜಾರಿಗೆ ಬಂದ ಹಾಗೂ ಆರು ಭಾರತೀಯರು ವಾಯುಬಲದ ಹುದ್ದೆಗಳನ್ನು ವಿದ್ಯುಕ್ತವಾಗಿ ಪಡೆದ ದಿನವಾಗಿತ್ತು. ರಾಯಲ್ ಏರ್‍ಪೋರ್ಸ್‍ನ (ಆರ್‍ಎಎಫ್) ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಸಿ.ಎ.ಬೌಚರ್ ಈ ನವಜಾತ ವಿಭಾಗದ ಮೊದಲ ಅಧಿಪತಿ(ಕಮಾಂಡಿಂಗ್ ಆಫೀಸರ್)

	ಎ ವಿಭಾಗದ ಸಿಬ್ಬಂದಿಯಲ್ಲಿ ಆರು ಮಂದಿ ಅಧಿಕಾರಿಗಳು ಹಾಗೂ ಕರಾಚಿಯ ಡ್ರಿಗ್ಸ್ ರಸ್ತೆಯ ಆರ್‍ಎಎಫ್ ಕೇಂದ್ರದಲ್ಲಿ ತರಬೇತಿ ಪಡೆದ ಹವಾಯಿ ಸಿಪಾಯಿಗಳಿದ್ದರು. ಈ ವಿಭಾಗದಲ್ಲಿ ನಾಲ್ಕು ವೆಸ್ಟ್‍ಲ್ಯಾಡ್ ವ್ಯಾಪಿತಿ ವಿಮಾನಗಳಿದ್ದವು. ಇವು ನಿಧಾನಗತಿಯಲ್ಲಿ ಹಾರುವ, ಎರಡು ಜೊತೆ ರೆಕ್ಕೆಗಳ ವಿಮಾನಗಳಾಗಿದ್ದು, ಅವುಗಳ ವೇಗ ಎಂದೂ ಗಂಟೆಗೆ 80/85 ಮೈಲಿ ಮೀರುತ್ತಿರಲಿಲ್ಲ. ಒಂದರ ಹಿಂದೊಂದು ಇದ್ದ ಕಾಕ್‍ಪಿಟ್‍ಗಳು (ವಿಮಾನ ಚಾಲಕ ಕುಳಿತುಕೊಳ್ಳುವ ಸ್ಥಳ) ಆಕಾಶಕ್ಕೆ ತೆರೆದುಕೊಂಡಿದ್ದು ಹಾಗೂ ಚಾಲಕರ ನೆರವಿಗೆ ಇದ್ದ  ಸಾಧನ ಸಲಕರಣೆಗಳು ಅತ್ಯಲ್ಪವಾಗಿದ್ದವು. ಒಬ್ಬ ಪ್ರಯಾಣಿಕರನ್ನು ಹಿಂದಿನ ಕಾಕ್‍ಪಿಟ್‍ನಲ್ಲಿ ಒಯ್ಯಬಹುದಾಗಿತ್ತು ಹಾಗೂ ವಿಮಾನ ಹಾರಾಟದ ಸಮಯದಲ್ಲಿ ಕೆಳಗೆ ಬೀಳುವುದನ್ನು ತಪ್ಪಿಸಲು ಆ ಪ್ರಯಾಣಿಕನನ್ನು ವಿಮಾನಕ್ಕೆ ಸರಪಳಿಯಿಂದ ಜೋಡಿಸಲಾಗುತ್ತಿತ್ತು.
ಭಾರತೀಯ ವಾಯುಬಲದ ಮೊದಲ ಕಾರ್ಯಾಚರಣೆ

	1937 ರಲ್ಲಿ ಈಗ ಪಾಕಿಸ್ತಾನದಲ್ಲಿರುವ ವಾಯುವ್ಯ ಸರಹದ್ದು ಪ್ರಾಂತ್ಯದ ವಾಜರಿ ಮತ್ತು ಅಫ್ರಿಡಿ ಜನಾಂಗಗಳ ಉದ್ರಿಕ್ತ ಜನರು ನಡೆಸುತ್ತಿದ್ದ ದಂಗೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಎ ವಿಭಾಗವನ್ನು ಆ ಪ್ರಾಂತ್ಯದ, ಮಿರಾನ್ ಶಾಗೆ ಕಳಿಸಲಾಯಿತು. ಈ ವಿಭಾಗದ ಜೊತೆಗೆ ಇನ್ನೂ ಎರಡು ವಿಭಾಗಗಳನ್ನು ರಚಿಸಿ 1938ರಲ್ಲಿ ಒಂದು ದಳವನ್ನು (ಸ್ಕ್ವಾಡ್ರನ್) ರಚಿಸಲಾಯಿತು. ಹಾಗೂ ಇದನ್ನು ಬಹುತೇಕ ವಾಯುವ್ಯ ಸರಹದ್ದು ಪ್ರಾಂತ್ಯದಲ್ಲಿ ಬಳಸಲಾಯಿತು. ದಂಗೆಯನ್ನಡಗಿಸಲು ನಡೆಸಿದ ಸೈನ್ಯದ ಕಾರ್ಯಾಚರಣೆಗೆ ಬೆಂಬಲವಾಗಿ ಈ ದಳದ ವಿಮಾನಗಳು ಅನೇಕ ದಾಳಿಗಳನ್ನು ನಡೆಸಿದವು.

ಎರಡನೆಯ ವಿಶ್ವ ಯುದ್ಧದಲ್ಲಿ

	1939 ರ ಸೆಪ್ಟೆಂಬರ್ 3 ರಂದು ಎರಡನೆಯ ವಿಶ್ವಯುದ್ಧ ಪ್ರಾರಂಭವಾದಾಗ ನಂಬರ್ ಒಂದು ದಳದ ಅಧಿಪತ್ಯವನ್ನು ಫ್ಲೈಟ್ ಲೆಫ್ಟಿನೆಂಟ್ ಮುಖರ್ಜಿ ಅವರಿಗೆ ವಹಿಸಲಾಯಿತು. ಭಾರತೀಯ ವಾಯು ಬಲದ ಇತಿಹಾಸದಲ್ಲಿ ಇದು ಮಹತ್ವದ ದಿನ. ಏಕೆಂದರೆ ಆರ್‍ಎಎಫ್ ಅಧಿಕಾರಿ ಅದುವರೆಗೂ ಅಧಿಪತ್ಯವನ್ನು ಹೊಂದಿದ್ದ ದಳದ ಅಧಿಪತ್ಯವನ್ನು ಭಾರತೀಯ ಅಧಿಕಾರಿಗೆ ಮೊದಲ ಬಾರಿಗೆ ವಹಿಸಲಾಯಿತು. ಎರಡನೆಯ ವಿಶ್ವ ಯುದ್ಧ ಪ್ರಾರಂಭವಾದಾಗ ಭಾರತೀಯ ವಾಯುಬಲ ಒಂದೇ ಒಂದು ದಳವನ್ನು ಹೊಂದಿತ್ತು. ಹಾಗೂ ಅದರ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ 14 ಅಧಿಕಾರಿಗಳು ಮತ್ತು 146 ವಾಯು ಸೈನಿಕರು ಸೇರಿದ್ದರು.

	ಭಾರತದ ಉಪಖಂಡದ ರಕ್ಷಣೆಗೆ ವಾಯುಬಲವನ್ನು ಬಳಸುವ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು. ಚಾಟ್‍ಫೀಲ್ಡ್ ಸಮಿತಿ ಎಂದೇ ಹೆಸರಾಗಿದ್ದ ಈ ಸಮಿತಿಯ ಸಲಹೆಗಳ ಮೇರೆಗೆ ಸ್ವ-ಇಚ್ಚೆಯ ಆಧಾರದ ಮೇಲೆ ಕರಾವಳಿ ರಕ್ಷಣಾ ವಿಭಾಗವನ್ನು ರಚಿಸಲು ನಿರ್ಧರಿಸಲಾಯಿತು. ಅದರಂತೆ ಕರಾಚಿ, ಬಾಂಬೆ, ಕೊಚ್ಚಿ, ಮದ್ರಾಸ್ ಮತ್ತು ಕಲ್ಕತ್ತೆಯಲ್ಲಿ ಕರಾವಳಿ ರಕ್ಷಣಾ ವಿಭಾಗಗಳನ್ನು ಸ್ಥಾಪಿಸುವ ಮೂಲಕ ಭಾರತೀಯ ವಾಯುಬಲದ ಸ್ವ-ಇಚ್ಚಾ ಮೀಸಲು ಪಡೆಯನ್ನು ಹೊಂದಲಾಯಿತು. ನಂತರ ವಿಶಾಖ ಪಟ್ಟಣದಲ್ಲಿ ಇನ್ನೊಂದು ಕರಾವಳಿ ರಕ್ಷಣಾ ವಿಭಾಗವನ್ನು ರಚಿಸಲಾಯಿತು. ಈ ವಿಭಾಗಗಳ ತಿರುಳಿನ ಸುತ್ತ ಮುಂದಿನ ವರ್ಷಗಳಲ್ಲಿ ಭಾರತೀಯ ವಾಯುಬಲ ವಿಸ್ತರಣೆ ಗೊಂಡಿತು. 1942 ರ ಹೊತ್ತಿಗೆ ಈ ವಿಭಾಗಗಳನ್ನು ವಿಸರ್ಜಿಸಿ ಅವುಗಳ ಬುನಾದಿಯ ಮೇಲೆ ಮೊದಲನೆಯ ದಳದ ಜೊತೆಗೆ ಐದು ಹೊಸ ದಳಗಳನ್ನು ರಚಿಸಲಾಯಿತು. ಲೈಸ್ಯಾಂಡರ್ ವಿಮಾನಗಳು ಹಾಗೂ ನಂತರ ಹರಿಕೇನ್ ಮತ್ತು ಸ್ಪಿಟ್‍ಫೈರ್ ಯುದ್ಧ ವಿಮಾನಗಳು ಭಾರತೀಯ ವಾಯುಬಲಕ್ಕೆ ಸೇರ್ಪಡೆಯಾದವು. 1944 ರ ಹೊತ್ತಿಗೆ ವಾಯುಬಲ 9 ದಳಗಳನ್ನು ಹೊಂದಿತ್ತು. ಹಾಗೂ ಈ ಪೈಕಿ 7 ಹರಿಕೇನ್ ಯುದ್ಧ ವಿಮಾನಗಳ ದಳಗಳಾಗಿದ್ದವು.

ಬರ್ಮಾ ಕಾರ್ಯಾಚರಣೆ

	ಎರಡನೆಯ ವಿಶ್ವ ಯುದ್ಧದಲ್ಲಿ ಮೊದಲ ಬಾರಿಗೆ ಭಾರತೀಯ ವಾಯುಬಲ ಬರ್ಮಾ ಕಾರ್ಯಾಚರಣೆಯಲ್ಲಿ ತನ್ನ ಶಕ್ತಿ ಪ್ರಯೋಗ ಮಾಡಿತು. ಈ ಕಾರ್ಯಾಚರಣೆಯಲ್ಲಿ ದಳ ಅತ್ಯಂತ ಹೆಚ್ಚಿನ ಪಾಲನ್ನು ಹೊಂದಿತ್ತು. ಸ್ಕ್ವಾಡ್ರನ್ ಲೀಡರ್ ಜಂಬೋ ಮಜುಂದಾರ್ ಅವರ ನಂಬರ್ 1 ನಾಯಕತ್ವದಲ್ಲಿ ನಂಬರ್ 1ನೇ ದಳ 1942 ರ ಫೆಬ್ರವರಿ 1ರಂದು ಬರ್ಮಾದಲ್ಲಿ ಇಳಿಯಿತು. ಜಪಾನ್‍ನ ವಾಯುಬಲದ ವಿಮಾನಗಳೂ ನಂಬರ್ 1 ದಳ ಇಳಿದಿದ್ದ ಟೌನ್‍ಗೌ ವಿಮಾನನಿಲ್ದಾಣದ ಮೇಲೆ ಅಂದೇ ರಾತ್ರಿ ದಾಳಿ ಮಾಡಿದ್ದವು. ಮೂಲತಃ ಪೂರ್ವಾನ್ವೇಷಣೆಗಾಗಿ ಬಳಸುತ್ತಿದ್ದ ತಮ್ಮ ಲೈಸ್ಯಾಂಡರ್ ವಿಮಾನದಲ್ಲಿ, ಬಾಂಬ್‍ಗಳನ್ನು ಒಯ್ಯುವುದಕ್ಕಾಗಿ ಕ್ಷಿಪ್ರ ಬದಲಾವಣೆಗಳನ್ನು ಮಾಡಿ ಮಜುಂದಾರ್ ಆ ಪ್ರದೇಶದಲ್ಲಿದ್ದ ಜಪಾನೀಯರ ಅತಿ ದೊಡ್ಡ ವಿಮನನಿಲ್ದಾಣದ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದರು. ಈ ದಳದ ಹಾಗೂ ಅದರ ಅಧಿಪತಿಯ ಅಸಾಧಾರಣ ಸಾಧನೆಗಾಗಿ ಸ್ಕ್ವಾಡ್ರನ್ ಲೀಡರ್ ಮಜುಂದಾರ್ ಅವರಿಗೆ ಡಿಸ್ಟಿಂಗ್ವಿಷ್ ಪ್ಲೈಯಿಂಗ್ ಕ್ರಾಸ್ (ಡಿ.ಎಫ್.ಸಿ) ಪದಕವನ್ನು ನೀಡಲಾಯಿತು. ಎರಡನೆಯ ವಿಶ್ವ ಯುದ್ಧದಲ್ಲಿ ಭಾರತೀಯ ವಾಯುಬಲದ ಅಧಿಕಾರಿಯೊಬ್ಬರಿಗೆ ನೀಡಲಾದ ಮೊದಲ ಡಿ.ಎಫ್.ಸಿ ಪದಕ ಇದಾಗಿತ್ತು.
ಮೆಹರ್‍ಸಿಂಗ್ ಅವರ ನಾಯಕತ್ವದಲ್ಲಿ ನಂಬರ್ 6ನೇ ದಳ ಬರ್ಮಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ತಿಂಗಳಿಗೆ ನಡೆಸಿದ ಸರಾಸರಿ ದಾಳಿಗಳ ಲೆಕ್ಕದಲ್ಲಿ  ಒಂದು ದಾಖಲೆಯನ್ನೇ ಸ್ಥಾಪಿಸಿತು. ನಂ 1 ಮತ್ತು ನಂ 7 ದಳಗಳು ಮುತ್ತಿಗೆಗೊಳಗಾಗಿದ್ದ ಇಂಫಾಲ್ ಪಟ್ಟಣದ ಬಳಿ ತಮ್ಮ ಕೇಂದ್ರವನ್ನು ಹೊಂದಿದ್ದವು. ನಂ 7ನೇ ದಳದ ನಾಯಕತ್ವವನ್ನು ಹೇಮ್ ಚೌಧರಿ ಹೊಂದಿದ್ದರು. ನಂತರ 1944ರ ಮಾರ್ಚಿನಲ್ಲಿ ಸ್ಕ್ವಾಡ್ರನ್ ಲೀಡರ್ ಪಿ.ಸಿ.ಲಾಲ್ ಅವರು ಅಧಿಪತ್ಯವನ್ನು ವಹಿಸಿಕೊಂಡರು. ಬರ್ಮಾ ರಂಗದಲ್ಲಿ ಇತರ ಎಲ್ಲ ದಳಗಳಿಗಿಂತಲೂ ಲಾಲ್ ಅವರ ದಳ ಅತಿ ಹೆಚ್ಚಿನ ದಾಳಿಗಳನ್ನು ನಡೆಸಿತು. ಇಂಫಾಲ್ ಪಟ್ಟಣದ ಸಮೀಪ ಸ್ಕ್ವಾಡ್ರನ್ ಲೀಡರ್ ಅರ್ಜುನ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತೀಯ ವಾಯುಬಲ ಜಪಾನೀ ಸೈನ್ಯದ ಮೇಲೆ ಸತತ ಬಾಂಬ್ ದಾಳಿಗಳನ್ನು ನಡೆಸಿ ಜಪಾನೀಯರು ಹಿಮ್ಮೆಟ್ಟುವಂತೆ ಮಾಡಿತು. ಪೀಲ್ಡ್ ಮಾರ್ಷಲ್ ಕ್ಲಾಡ್ ಆಶಿಸ್‍ಲೆಕೆ ಬರ್ಮಾದ ಅರಣ್ಯಕ್ಕೆ ವಿಮಾನದಲ್ಲಿ ಧಾವಿಸಿ ಡಿಎಫ್‍ಎಸ್ ಪದಕವನ್ನು ಶ್ರೇಷ್ಠ ವೈಮಾನಿಕ ಕಾರ್ಯಾಚರಣೆಗಾಗಿ ಅರ್ಜುನ್‍ಸಿಂಗ್ ಅವರಿಗೆ ನೀಡಿದರು.

	ಎರಡನೆಯ ವಿಶ್ವ ಯುದ್ಧದಲ್ಲಿ ಬ್ರಿಟನ್ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗ, ಭಾರತೀಯ ವಾಯುಬಲದ 24 ಚಾಲಕರನ್ನು 1940ರ ಸೆಪ್ಟೆಂಬರ್‍ನಲ್ಲಿ ಇಂಗ್ಲೆಂಡಿಗೆ ಕಳಿಸಲಾಯಿತು. ಆರ್‍ಎಎಫ್‍ನ ಅನೇಕ ತುಕಡಿಗಳೊಂದಿಗೆ ಈ ಚಾಲಕರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆರು ಚಾಲಕರು ಬ್ಯಾಟಲ್ ಆಫ್ ಬ್ರಿಟನ್‍ನಲ್ಲಿ (ಜರ್ಮನಿ ಮತ್ತು ಬ್ರಿಟನ್ ಯುದ್ಧ ವಿಮಾನಗಳ ನಡುವೆ ನಡೆದ ಅತ್ಯಂತ ಪ್ರಮುಖ ಹೋರಾಟ) ಭಾಗವಹಿಸಿದ್ದರು ಹಾಗೂ ಅವರಲ್ಲಿ ಇಬ್ಬರು ಹತರಾದರು. ಇನ್ನೂ ಆರು ಚಾಲಕರು ಬೇರೆ ಬೇರೆ ಸಾಹಸದ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡರು. ಬದುಕಿ ಉಳಿದವರ ಪೈಕಿ, ಮುಂದಿನ ವರ್ಷಗಳಲ್ಲಿ ಭಾರತೀಯ ವಾಯುಬಲವನ್ನು ಪೋಷಿಸಿ, ಬೆಳೆಸಿದವರಲ್ಲಿ ದಿವಾನ್, ರಂಜನ್ ದತ್, ಎಸ್.ಪಿ.ಷಾಹಿ ಮತ್ತು ಶಿನ್‍ದೇವ್‍ಸಿಂಗ್ ಸುಪರಿಚಿತರಾಗಿದ್ದಾರೆ.

	ಎರಡನೆಯ ವಿಶ್ವ ಯುದ್ಧ ಭಾರತೀಯ ವಾಯು ಬಲದ ವಿಮಾನಚಾಲಕರು ಮತ್ತಿತರ ಸಿಬ್ಬಂದಿಗೆ ಘನತೆ ತಂದುಕೊಟ್ಟ ಕಾಲವಾಗಿತ್ತು. ಈಗಾಗಲೇ ತಿಳಿಸಿದಂತೆ ಜಂಬೋ ಮಜುಂದಾರ್, ಅರ್ಜುನ್‍ಸಿಂಗ್ ಡಿಎಫ್‍ಸಿ ಪದಕ ಗಳಿಸಿದರಲ್ಲದೆ ಮೆಹರ್ ಬಾಬಾ ಡಿಎಸ್‍ಒ ಗಳಿಸಿದರು. ಪಿ.ಎಸ್.ಲಾಲ್ ಎರಡನೆಯ ಡಿಎಫ್‍ಸಿ ಪದಕ ಗಳಿಸಿದರು. ಹಾಗೂ ವರ್ಮಾ, ಇಂಜಿನಿಯರ್, ರಾಜಾರಾಮ್ ಮತ್ತಿತರರೂ ಅಂತಹ ಪದಕ ಗಳಿಸಿದವರಲ್ಲಿ ಸೇರಿದ್ದರು. ಒಟ್ಟು 23 ಪದಕಗಳು ಭಾರತೀಯ ವಾಯುಬಲಕ್ಕೆ ಸಂದವು. ಎರಡನೆಯ ವಿಶ್ವ ಯುದ್ಧದಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದಕ್ಕಾಗಿ 1945 ರ ಮಾರ್ಚ್ 12 ರಂದು ಇಂಗ್ಲೆಂಡಿನ ದೊರೆ ಭಾರತೀಯ ವಾಯುಬಲಕ್ಕೆ ರಾಯಲ್ ಎಂಬ ಪದದ ಗೌರವವನ್ನು ಸೇರಿಸಿದರು.

ವಿಭಜನೆ

	1947 ರಲ್ಲಿ ಸ್ವಾತಂತ್ರ ಬಂದಾಗ ದೇಶ ವಿಭಜನೆಗೊಂಡಿತು. ಭಾರತದ ವಾಯುಬಲವನ್ನು ಎರಡು ಭಾಗಗಳನ್ನಾಗಿ ಮಾಡಲಾಯಿತು. ಅವಿಭಜಿತ ಭಾರತದ ವಾಯುಬಲದಲ್ಲಿದ್ದ ಟೆಂಪೆಸ್ಟ್ ಯುದ್ಧ ವಿಮಾನಗಳ ಎಂಟು ದಳಗಳಲ್ಲಿ ಆರು ದಳಗಳನ್ನು ಭಾರತಕ್ಕೆ ಉಳಿದ ಎರಡು ದಳಗಳನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. ಅಂತೆಯೇ ಡಕೋಟ ವಿಮಾನಗಳ ಎರಡು ಸಾರಿಗೆ ದಳಗಳಲ್ಲಿ ಒಂದನ್ನು ಭಾರತಕ್ಕೂ, ಇನ್ನೊಂದನ್ನೂ ಪಾಕಿಸ್ತಾನಕ್ಕೂ ಹಂಚಲಾಯಿತು. 

ಕಾಶ್ಮೀರ ಕಾರ್ಯಾಚರಣೆ

	ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬಲಪ್ರಯೋಗದಿಂದ ವಶಪಡಿಸಿಕೊಳ್ಳುವ ಉದ್ದೇಶದಿಂದ 1947 ರ ಅಕ್ಟೋಬರ್ 22 ರಂದು ಪಾಕಿಸ್ತಾನ ತಾನು ಶಸ್ತ್ರಸಜ್ಜಿತಗೊಳಿಸಿದ್ದ ಬುಡಕಟ್ಟು ಜನಾಂಗಗಳ ಜನರಿಂದ ಕಾಶ್ಮೀರ ಕಣಿವೆಯ ಮೇಲೆ ಆಕ್ರಮಣ ಪ್ರಾರಂಭಿಸಿತು. ಪಾಕಿಸ್ತಾನದ ಮಿಲಿಟರಿ ನಾಯಕರು ಈ ಆಕ್ರಮಣದ ನಾಯಕತ್ವ ವಹಿಸಿದ್ದರು. ಬುಡಕಟ್ಟು ಯೋಧರ ಹಿಂದೆಯೇ ನಾಗರಿಕರ ಉಡುಪಿನಲ್ಲಿದ್ದ ಪಾಕಿಸ್ತಾನದ ಸೈನಿಕರೇ ಆಕ್ರಮಣದಲ್ಲಿ ಸೇರಿದ್ದರು. 5000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಈ ಸೈನ್ಯ ಝೀಲಂ ನದಿಯನ್ನು ದಾಟಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪ್ರವೇಶಿಸಿದ 48 ಗಂಟೆಗಳ ನಂತರ ಆಕ್ರಮಣದ ಸುದ್ದಿ ಮೊದಲಬಾರಿಗೆ ಭಾರತ ಸರ್ಕಾರಕ್ಕೆ ತಲುಪಿತು. ಕಾಶ್ಮೀರವನ್ನು ಉಳಿಸಬೇಕೆಂದು ಮಹಾರಾಜ ಹರಿಸಿಂಗ್ ಮತ್ತು ಶೇಕ್ ಮಹಮದ್ ಅಬ್ದುಲ್ಲಾ ಅಕ್ಟೋಬರ್ 25 ರಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದರು. ಅದರ ಮರುದಿನ, ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿದ್ಯುಕ್ತವಾಗಿ ಭಾರತಕ್ಕೆ ಸೇರ್ಪಡೆಯಾಗುವ ಒಪ್ಪಂದಕ್ಕೆ ಮಹಾರಾಜ ಹರಿಸಿಂಗ್ ಸಹಿ ಹಾಕಿದರು. ಹಾಗೂ ಅಂದೇ ಸಚಿವ ಸಂಪುಟ ಸಶಸ್ತ್ರ ಪಡೆಗಳನ್ನು ಬಳಸಿ ಶತ್ರುಸೈನ್ಯವನ್ನು ಹಿಮ್ಮೆಟ್ಟಿಸುವ ನಿರ್ಧಾರ ಕೈಗೊಂಡಿತು. ಭಾರತೀಯ ವಾಯುಬಲದ ಮೂರು ಸಾರಿಗೆ ವಿಮಾನಗಳು ಕರ್ನಲ್ ಬಿ,ಆರ್. ರಾಯ್ ಅವರ ನಾಯಕತ್ವದ ಸೇನಾ ಬಲದ ಮೊದಲ ತುಕಡಿಯನ್ನು ಅಕ್ಟೋಬರ್ 27 ರಂದು ಶ್ರಿನಗರದ ವಿಮಾನನಿಲ್ದಾಣದಲ್ಲಿ ಇಳಿಸಿದವು. ಸುಮಾರು 100 ಸಿವಿಲ್ ವಿಮಾನಗಳ ಚಾಲಕರು ಮತ್ತು ಸಿಬ್ಬಂದಿಯ ನೆರವಿನಿಂದ ಭಾರತೀಯ ವಾಯುಬಲ ಮೂರು ವಾರಗಳು ಸತತವಾಗಿ ಸೇನ ತುಕಡಿಗಳನ್ನು ಯುದ್ಧರಂಗಕ್ಕೆ ರವಾನಿಸಿದವು.

	ಕಾಶ್ಮೀರ ಕಾರ್ಯಾಚರಣೆಯಲ್ಲಿ 1948 ರ ಮೇ 24 ರಂದು ಏರ್ ಕಮೋಡೋರ್ ಮೆಹರ್‍ಸಿಂಗ್ ಅವರು ಹಿಮಾಲಯ ಪರ್ವತಗಳ, ನಕ್ಷೆಗಳಿಲ್ಲದ ವಾಯುಮಾರ್ಗದಲ್ಲಿ ತಮ್ಮ ಡಕೋಟ ವಿಮಾನ ನಡೆಸಿ ಸಮುದ್ರ ಮಟ್ಟಕ್ಕಿಂತ 11,450 ಅಡಿ ಎತ್ತರದಲ್ಲಿನ ಲೇಹ್‍ನಲ್ಲಿ ಇಳಿಸಿ ವಿಶ್ವದಾಖಲೆಯನ್ನು ಸ್ಥಾಪಿಸಿದರು. ಅವರು ತಮ್ಮ ವಿಮಾನವನ್ನು ಸೂಕ್ತವಾಗಿ ಮಾರ್ಪಡಿಸಿ ಶತ್ರು ಸೈನಿಕರ ಮೇಲೆ ಬಾಂಬ್ ದಾಳಿಯನ್ನು ನಡೆಸಿದರು.
ಐವತ್ತರ ದಶಕದಲ್ಲಿ ಭಾರತೀಯ ವಾಯುಬಲ.

	1950ರ ಜನವರಿ 26 ರಂದು ಭಾರತ ಗಣರಾಜ್ಯವಾದಾಗ, ಇಂಗ್ಲೆಂಡ್‍ನ ದೊರೆ ಭಾರತೀಯ ವಾಯುಬಲಕ್ಕೆ ಸೇರಿಸಿದ್ದ ರಾಯಲ್ ಪದವನ್ನು ಕೈ ಬಿಡಲಾಯಿತು. ಭಾರತೀಯ ವಾಯುಬಲದ ಮೊದಲ ವಿಭಾಗ ರಚನೆಗೊಂಡ ಸರಿಯಾಗಿ 21 ವರ್ಷಗಳ ನಂತರ 1954 ರ ಏಪ್ರಿಲ್ 1 ರಂದು ವಾಯು ಬಲದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಏರ್ ಮಾರ್ಷಲ್ ಸುಬ್ರತೋ ಮುುಖರ್ಜಿ ಪ್ರಧಾನ ದಂಡನಾಯಕ ಹಾಗೂ ವಾಯುಬಲದ ಪ್ರಥಮ ಭಾರತೀಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 1948 ರ ನವೆಂಬರ್‍ನಲ್ಲಿ ವ್ಯಾಂಪೈರ್ ಎಫ್.ಎಂ.ಕೆ-3 ಜೆಟ್ ಯುದ್ಧವಿಮಾನಗಳನ್ನು ಹೊಂದುವ ಮೂಲಕ ಭಾರತೀಯ ವಾಯುಬಲ ಜೆಟ್ ಯುಗವನ್ನು ಪ್ರವೇಶಿಸಿತು. 1953 ರಲ್ಲಿ ಫ್ರಾನ್ಸ್‍ನಿಂದ  ರೂಫಾನಿ ಯುದ್ಧ ವಿಮಾನಗಳನ್ನೂ ಅಮೆರಿಕದಿಂದ ಸಿ-119 ಫೇರ್‍ಚೈಲ್ಡ್ ಪ್ಯಾಕೆಟ್ ಸಾರಿಗೆ ವಿಮಾನಗಳನ್ನು, ಭಾರತೀಯ ವಾಯುಬಲ ಪಡೆದುಕೊಂಡಿತು. 1956-57 ರಲ್ಲಿ ಮಿಸ್ಟೀರ್ ಯುದ್ಧ ವಿಮಾನಗಳು ವಾಯುಬಲಕ್ಕೆ ಸೇರ್ಪಡೆಯಾದವು. ಅನಂತರ ಹಂಟರ್ ಮತ್ತು ನ್ಯಾಟ್ ಯುದ್ಧ ವಿಮಾನಗಳು ಬಂದವು. ಕ್ಯಾನ್‍ಬೆರಾ ಬಾಂಬರ್ ವಿಮಾನಗಳನ್ನು ಬ್ರಿಟನ್‍ನಿಂದ ಪಡೆದುಕೊಳ್ಳಲಾಯಿತು. ಈ ವಿಮಾನಗಳನ್ನು ಪೂರ್ವಾನ್ವೇಷಣೆಗಾಗಿಯೂ ಬಳಸಬಹುದಾಗಿತ್ತು.

	ದೇಶಿಯ ವಿಮಾನ ನಿರ್ಮಾಣ ಕೈಗಾರಿಕೆ ವಿನ್ಯಾಸಗೊಳಿಸಿ ತಯಾರಿಸಿದ ಹೆಚ್-ಎಫ್-24 (ಮಾರುತ್) ಮತ್ತು ಹೆಚ್‍ಜೆಟಿ-16(ಕಿರಣ್) ಹಾಗೂ ಎಚ್‍ಎಸ್-748 ವಿಮಾನಗಳು ಭಾರತೀಯ ವಾಯುಬಲವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿದವು. ಭಾರತೀಯ ವಾಯುಬಲದ ನಂ 1 ದಳದ 1961 ರ ಗೋವೆಯ ವಿಮೋಚನಾ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿತು. ಮಿಸ್ಟೀರ್ Α ಎಂಬ ವಿಮಾನಗಳಿಂದ ಸಜ್ಜುಗೊಂಡಿದ್ದ ನಂ 1 ದಳ ಮುಂಬೈನ ಸಾಂತಾಕ್ರೂಜ್ ವಿಮಾನ ನಿಲ್ದಾಣದಿಂದ ಹೊರಟು ಗೋವೆ, ಡಮನ್ ಮತ್ತು ಡಿಯುಗಳ ಮೇಲೆ ನಿರಂತರ ದಾಳಿ ನೆಡೆಸಿತು. ಇದು ಅತ್ಯಂತ ಕ್ಷಿಪ್ರ ಕಾರ್ಯಾಚರಣೆಯಾಗಿದ್ದರೂ ನಂ 1 ದಳದ ವಿಮಾನಗಳು 586 ರಾಕೆಟ್ ಗಳನ್ನು 176 ಬಾಂಬ್‍ಗಳನ್ನು ಪೋರ್ಚುಗೀಸರ ವಸಾಹತಾಗಿದ್ದ ಈ ಪ್ರದೇಶದ ಮೇಲೆ ಬಳಸಿ ಪೋರ್ಚುಗೀಸರು ಬೇಗ ಶರಣಾಗುವಂತೆ ಮಾಡಿದವು.

1962 ರ ಭಾರತ ಚೀನಾ ಬಿಕ್ಕಟ್ಟು.

	1962 ರಲ್ಲಿ ಚೀನಾದೊಂದಿಗೆ ಉಂಟಾದ ಬಿಕ್ಕಟ್ಟಿನಲ್ಲಿ ಭಾರತೀಯ ವಾಯು ಬಲದ ಪಾತ್ರ ಯೋಧರು ಮತ್ತು ಸಾಮಗ್ರಿಗಳನ್ನು ನಿರ್ದಿಷ್ಟ ಪಡಿಸಿದ ಸ್ಥಳಗಳಿಗೆ ಒಯ್ಯುವುದು ಹಾಗೂ ಗಾಯಗೊಂಡ ಯೋಧರನ್ನು ಒಯ್ಯುವುದಕ್ಕೆ ಸೀಮಿತವಾಗಿತ್ತು.

1965 ರ ಭಾರತ-ಪಾಕಿಸ್ತಾನ ಯುದ್ಧ

	1965 ರ ಸೆಪ್ಟೆಂಬರ್ 1 ರಂದು ಪಾಕಿಸ್ತಾನದ ವಾಂಛ್-ಚೌರಿಯನ್ ವಲಯದಲ್ಲಿ ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ ಎರಡನೆಯ ಬಾರಿಗೆ ಕಾಶ್ಮೀರದ ತುದಿ ಒಂದು ಸಣ್ಣ ಎಳೆಯ ತುದಿಯಲ್ಲಿ ನೇತಾಡುತ್ತಿದ್ದಂತೆ ಕಂಡುಬಂದಿತು. ಸೇನಾಬಲ ನೆರವನ್ನು ಕೋರಿದ ಒಂದು ಗಂಟೆ 19 ನಿಮಿಷಗಳ ಆನಂತರ ಭಾರತೀಯ ವಾಯುಬಲ ತನ್ನ ದಾಳಿಯನ್ನು ಪ್ರಾರಂಭಿಸಿತು. ಮುಂದಿನ ಒಂದೂವರೆ ಗಂಟೆಗಳಲ್ಲಿ ವಾಯುಬಲದ ವಿಮಾನಗಳು ನಡೆಸಿದ 26 ದಾಳಿಗಳಲ್ಲಿ ಶತ್ರುವಿನ 13 ಟ್ಯಾಂಕ್‍ಗಳು, 2 ಫಿರಂಗಿಗಳು ಮತ್ತು 62 ವಾಹನಗಳು ನಾಶವಾದವು. ಸೆಪ್ಟೆಂಬರ್ 3 ರಂದು ಸ್ಕ್ವಾಡ್ರನ್ ಲೀಡರ್ ಟ್ರೆವರ್ ಕೀಲರ್ ತಾವು ನಡೆಸುತ್ತಿದ್ದ ನ್ಯಾಟ್ ವಿಮಾನದಿಂದ ಪಾಕಿಸ್ತಾನದ ಎಫ್-86 ಸ್ಯಾಬರ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದರು. ಈ ಪುಟ್ಟ ನ್ಯಾಟ್ ವಿಮಾನಗಳು ಪಾಕಿಸ್ತಾನವೇ ಹೇಳಿಕೊಂಡಿರುವಂತೆ 13 ಸ್ಯಾಬರ್ ವಿಮಾನಗಳನ್ನು ಹೊಡೆದುರುಳಿಸಿದವು.

	ಚೀನಾದೊಡನೆ ನಡೆದ ಸಂಘರ್ಷದ ನಂತರ ಭಾರತದ ಸಶಸ್ತ್ರ ಪಡೆಗಳನ್ನು ವಿಸ್ತರಿಸಿ, ಬಲಗೊಳಿಸಲಾಯಿತು. ಭಾರತ-ನೇಪಾಳ ಮತ್ತು ಭಾರತ ಟಿಬೆಟ್ ಗಡಿಯಲ್ಲಿ ಎಚ್ಚರಿಕೆಯಿಂದಿರಲು 1962 ರ ಅಕ್ಟೋಬರ್ 25 ರಂದು ಮಧ್ಯ ವಾಯು ಅಧಿಪತ್ಯವನ್ನು ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಕಲ್ಕತ್ತೆಯ ರಾಣಿಕುಥಿಯಲ್ಲಿದ್ದ ಈ ಅಧಿಪತ್ಯದ ಪ್ರಧಾನ ಕಛೇರಿಯನ್ನು 1966 ರಲ್ಲಿ ಅಲಹಾಬಾದ್‍ಗೆ ವರ್ಗಾಯಿಸಲಾಯಿತು. ಪೂರ್ವ ಮತ್ತು ಈಶಾನ್ಯ ವಲಯದಲ್ಲಿ ಕಾರ್ಯಾಚರಣೆಯ ಸಾಮಥ್ರ್ಯವನ್ನು ಹೆಚ್ಚಿಸಲು ಪೂರ್ವ ವಾಯು ಅಧಿಪತ್ಯದ ಪ್ರಧಾನ ಕಛೇರಿಯನ್ನು 1963 ರ ಜೂನ್ 10 ರಂದು ಶಿಲ್ಲಾಂಗ್‍ಗೆ ವರ್ಗಾಯಿಸಲಾಯಿತು.

	ಜಗತ್ತಿನ ಅತ್ಯಂತ ಎತ್ತರದ ವಿಮಾನ ನಿಲ್ದಾಣವಾದ ದೌಲತ್‍ಬೇಗ್ ಓಲ್ಡಿಯಲ್ಲಿ ಸಾಮಗ್ರಿಗಳಿಂದ ಸಂಪೂರ್ಣವಾಗಿ ತುಂಬಿದ್ದ ಫೇರ್ ಚೈಲ್ಡ್ ಪ್ಯಾಕೆಟ್ ಸಾರಿಗೆ ವಿಮಾನವನ್ನು 1962 ರ ಜುಲೈ 22 ರಂದು ಇಳಿಸಿ ಸ್ಕ್ವಾಡ್ರನ್ ಲೀಡರ್ ಕೆ.ಎಸ್.ರಾಜ್ ದಾಖಲೆ ಸ್ಥಾಪಿಸಿದರು. 1969 ರ ಮೇ 8 ರಂದು ವಿಂಗ್ ಕಮ್ಯಾಂಡರ್ ಕೆ.ಕೆ.ಸಯನಿ ತಮ್ಮ ಎಸ್ಸ-315 ಹೆಲಿಕಾಪ್ಟರ್ ಅನ್ನು ಕರಕೋರಂ ಪರ್ವತ ಶ್ರೇಣಿಯಲ್ಲಿ 22500 ಅಡಿ ಎತ್ತರದಲ್ಲಿ ಇಳಿಸಿ ಇನ್ನೊಂದು ದಾಖಲೆ ಸ್ಥಾಪಿಸಿದರು.

	ಎಪ್ಪತ್ತರ ದಶಕದಲ್ಲಿ ಭಾರತೀಯ ವಾಯುಬಲ ಪಾಕಿಸ್ತಾನದೊಡನೆ ಮೂರನೆಯ ಸುತ್ತು 1971 ರಲ್ಲಿ ಪಾಕಿಸ್ತಾನ ಮೂರನೆಯ ಬಾರಿಗೆ ಭಾರತವನ್ನು ಕೆಣಕಿದಾಗ ಭಾರತೀಯ ವಾಯುಬಲ ಹಿಂದೆಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ತನ್ನ ಕೀರ್ತಿಯನ್ನು ಮೆರೆಯಿತು. ಆ ವರ್ಷದ ಡಿಸೆಂಬರ್ 3 ರಂದು ಪಾಕಿಸ್ತಾನ ಭಾರತದ ಅನೇಕ ಪ್ರಮುಖ ವಾಯು ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅದರ ಮರುದಿನ ಬೆಳಗಿನಿಂದ ಭಾರತೀಯ ವಾಯುಬಲ ಸತತವಾಗಿ ಶತ್ರು ನೆಲೆಗಳ ಮೇಲೆ ಭಾರೀ ಪ್ರಮಾಣದ ದಾಳಿಯನ್ನು ನಡೆಸಿತು. ಪೂರ್ವ ಯುದ್ಧ ರಂಗದಲ್ಲಿ 48 ಗಂಟೆಗಳೊಳಗಾಗಿ  ಪಾಕಿಸ್ತಾನದ ವಾಯುಬಲ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ತೇಜ್ ಗಾಂವ್ ಮತ್ತು ಢಾಕಾದಲ್ಲಿನ ಎರಡು ವಿಮಾನನೆಲೆಗಳನ್ನು ಧ್ವಂಸಗೊಳಿಸಲಾಯಿತು. ಹಾಗೂ ಅಲ್ಲಿದ್ದ 8 ಸ್ಯಾಬರ್ ವಿಮಾನಗಳು ಬಾಂಬ್ ದಾಳಿಗೆ ಸಿಕ್ಕಿ ನಾಶವಾದವು. ಇಲ್ಲವೇ ಪಾಕಿಸ್ತಾನಿಯರೇ ತೀವ್ರ ಹತಾಶೆಯಿಂದ ಅವುಗಳನ್ನು ನಾಶಗೊಳಿಸಿದರು. ಪಶ್ಚಿಮದ ಯುದ್ಧ ರಂಗದಲ್ಲಿ ರಾಜಾಸ್ಥಾನದ ಲೊಂಗೋವಾಲಾದಲ್ಲಿ ಪಾಕಿಸ್ತಾನದ ಟ್ಯಾಂಕ್‍ಗಳ ಮುನ್ನಡೆಯನ್ನು ಕೆಲವೇ ಹಂಟರ್ ವಿಮಾನಗಳು ಸ್ಥಗಿತಗೊಳಿಸಿದವು. ಜೈಸಲ್ಮೇರ್ ವಿಮಾನ ನೆಲೆಯಿಂದ ಹಾರಿದ ಹಂಟರ್ ವಿಮಾನಗಳ ದಾಳಿಯಿಂದ 37 ಶತ್ರು ಟ್ಯಾಂಕ್‍ಗಳು ಹಾನಿಗೊಂಡವು ಇಲ್ಲವೇ ನಾಶವಾದವು. ಡಿಸೆಂಬರ್ 4 ರಂದು ಭಾರತೀಯ ವಾಯುಬಲದ ಹಂಟರ್‍ವಿಮಾನಗಳು ಕರಾಚಿ ಬಂದರಿನ ತೈಲ ನೆಲೆಗಳ ಮೇಲೆ ಬಾಂಬ್‍ಗಳನ್ನು ಹಾಕಿದವು. ಅದಾದ 4 ದಿನಗಳ ನಂತರ ವಿಂಗ್ ಕಮಾಂಡರ್ ಕೆ.ಕೆ.ಬಧವಾರ್ ಅವರ ನಾಯಕತ್ವದಲ್ಲಿ ಕ್ಯಾನ್‍ಬೆರ್ರಾ ಬಾಂಬರ್‍ವಿಮಾನಗಳು ಅದೇ ತೈಲ ಟ್ಯಾಂಕರ್‍ಗಳ ಮೇಲೆ ಪುನಃ ನಡೆಸಿದ ಬಾಂಬ್ ದಾಳಿಯಿಂದ ಹೊತ್ತಿಕೊಂಡ ಬೆಂಕಿ ಯುದ್ಧ ನಿಲ್ಲುವವರೆಗೂ ಉರಿಯುತ್ತಲೇ ಇತ್ತು. ಹೀಗೆ ಶತ್ರುವಿನ ಅನೇಕ ನೆಲೆಗಳು ಅನಿಲ ಕಾರ್ಯಾಗಾರಗಳು ರೈಲ್ವೆ ಯಾರ್ಡ್‍ಗಳ ಮೇಲೆ ಭಾರತೀಯ ವಾಯುಬಲ ಯಶಸ್ವಿಯಾಗಿ ದಾಳಿ ನಡೆಸಿತು. ಇವೆಲ್ಲವುಗಳಿಗೆ ಕಳಶವಿಟ್ಟಂತೆ ಢಾಕಾದ ಗವರ್ನರ್ ಹೌಸ್ ಮೇಲೆ ವಾಯು ಬಲ ನಡೆಸಿದ ದಾಳಿಯಿಂದ ಬಾಂಗ್ಲಾ ದೇಶದಲ್ಲಿನ ಪಾಕಿಸ್ತಾನಿ ಪಡೆಗಳು ಕ್ಷಿಪ್ರವಾಗಿ ಶರಣಾಗತವಾದವು. ಫ್ಲೈಯಿಂಗ್ ಆಫೀಸರ್ ನಿರ್ಮಲ್‍ಜಿತ್ ಸಿಂಗ್ ಸೆಖೋನ್ ಅವರಿಗೆ ವಾಯುಬಲದ ಪರಮವೀರ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಅವರು ಏಕಾಂಗಿಯಾಗಿ ಶ್ರೀನಗರದ ವಾಯುನೆಲೆಯಿಂದ ನ್ಯಾಬ್ ವಿಮಾನದ ಮೂಲಕ ಪಾಕಿಸ್ತಾನದ ಮೂರು ಸ್ಯೂಬರ್ ಜೆಟ್ ವಿಮಾನಗಳನ್ನು ಹೊಡೆದುರುಳಿಸಿ, ನಾಲ್ಕನೆಯ ವಿಮಾನದ ದಾಳಿಗೆ ಬಲಿಯಾಗಿ ಹುತಾತ್ಮರಾದರು.

	1971ರ ಯುದ್ಧದ ನಂತರ ಭಾರತೀಯ ವಾಯುಬಲ ಸಂಘಟನೆಯ ಹಾದಿಯಲ್ಲಿ ಮುನ್ನಡೆಯಿತು. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆಯಲ್ಲಿದ್ದ ವಿಮಾನಗಳು ಮತ್ತು ಸಾಮಗ್ರಿ ಸಲಕರಣೆಗಳನ್ನು ಬದಲಾಯಿಸಲು ಯೋಜನೆಗಳನ್ನು ಕೈಗೊಳ್ಳಲಾಯಿತು. ಹೀಗೆ 1979 ರಲ್ಲಿ ಜಾಗ್ವಾರ್ ಯುದ್ಧ ವಿಮಾನಗಳನ್ನು ವಾಯುಬಲಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಆ ನಂತರ 1982 ರಲ್ಲಿ ವಾಯು ಬಲ ತನ್ನ 50 ವರ್ಷಗಳ ಸೇವೆಯನ್ನು ಮುಕ್ತಾಯಗೊಳಿಸಿದ ಸಂದರ್ಭದಲ್ಲಿ ಮಿಗ್-23 ಮತ್ತು ಮಿಗ್-25 ಯುದ್ಧ ವಿಮಾನಗಳನ್ನು ಪಡೆದುಕೊಳ್ಳಲಾಯಿತು. ನಂತರ ಆಗ ಹಳೆಯದಾಗಿದ್ದ ಡಕೋಟ ಮತ್ತು ಪ್ಯಾಕೆಟ್ ಸಾರಿಗೆ ವಿಮಾನಗಳ ಸ್ಥಾನದಲ್ಲಿ ಐಎಲ್-76 ಮತ್ತು ಎ.ಎನ್-32 ವಿಮಾನಗಳು ವಾಯುಬಲಕ್ಕೆ ಸೇರ್ಪಡೆಯಾದವು.

	1985 ರಲ್ಲಿ ವಿಶ್ವದಲ್ಲೇ ಅತ್ಯಂತ ಪ್ರಬಲ ಯುದ್ಧ ವಿಮಾನಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದ್ದ, ಫ್ರಾನ್ಸ್ ನಿರ್ಮಿತ ಮಿರಾಜ್ ಯುದ್ಧ ವಿಮಾನಗಳು ಭಾರತೀಯ ವಾಯು ಬಲಕ್ಕೆ ಸೇರಿದವು. ಎಂ.ಐ-8, ಎಂ.ಐ-17, ಎಂ.ಐ-26 ಹೆಲಕಾಪ್ಟರ್‍ಗಳು, ಮಿಗ್-29 ಯುದ್ಧ ವಿಮಾನಗಳು ಡೋರ್ನಿಯರ್ ವಿಮಾನಗಳನ್ನು ನಂತರ ಪಡೆದುಕೊಳ್ಳಲಾಯಿತು. 1984 ರ ಏಪ್ರಿಲ್ 3 ರಂದು ಭಾರತೀಯ ವಾಯುಬಲದ ಯುದ್ಧ ವಿಮಾನ ಚಾಲಕ ಸ್ಕ್ವಾಡ್ರನ್ ಲೀಡರ್ ರಾಕೇಶ್‍ಶರ್ಮಾ ಭಾರತ-ಸೋವಿಯತ್ ಜಂಟಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂತರಿಕ್ಷವನ್ನು ಪ್ರವೇಶಿಸಿದ ಭಾರತದ ಪ್ರಥಮ ಬಾಹ್ಯಾಕಾಶ ಯಾತ್ರಿಯಾದರು. 1984 ರಲ್ಲಿ ತಿರುವನಂತಪುರದಲ್ಲಿ ದಕ್ಷಿಣ ವಾಯು ಅಧಿಪತ್ಯವನ್ನು ಸ್ಥಾಪಿಸಲಾಯಿತು.

	1987ರ ಜೂನ್ 26 ರಂದು ನಾಲ್ಕು ಎಎನ್-32 ವಿಮಾನಗಳು ನಾಲ್ಕು ಮಿರಾಜ್-2000 ವಿಮಾನಗಳ ಬೆಂಗಾವಲಿನಲ್ಲಿ ಶ್ರೀಲಂಕಾದ ಜಾಫ್ನಾದ ಮೇಲೆ ಸರಬರಾಜುಗಳನ್ನು ಹಾಕಿದವು. ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ “ಆಪರೇಶನ್ ಪವನ್” ಮತ್ತು ಮಾಲ್ಡೀವ್ಸ್ ಸರ್ಕಾರದ ಕೋರಿಕೆಯ ಮೇರೆಗೆ “ಆಪರೇಷನ್ ಕ್ಯಾಕ್ಟಸ್” ಕಾರ್ಯಾಚರಣೆಗಳನ್ನು ಭಾರತೀಯ ವಾಯುಬಲ ಯಶಸ್ವಿಯಾಗಿ ಕೈಗೊಂಡಿತು. 

ಇಪ್ಪತ್ತರ ದಶಕದಲ್ಲಿ ಭಾರತೀಯ ವಾಯುಬಲ.

	ಇಪ್ಪತ್ತರ ದಶಕದಲ್ಲಿ ಭಾರತೀಯ ವಾಯುಬಲ ಕಾರ್ಗಿಲ್ ಕಾರ್ಯಾಚರಣೆಯೂ ಸೇರಿದಂತೆ ಇತರ ಅನೇಕ ಕಾರ್ಯಾಚರಣೆಗಳನ್ನು ನಡೆಸಿತು. 1994ರ ಡಿಸೆಂಬರ್ 17 ರಂದು ಮಹಿಳೆಯರ ಮೊದಲ ತಂಡ ವಿಮಾನ ಚಾಲನೆಯಲ್ಲಿ ತರಬೇತಿ ಪಡೆದು ಅಧಿಕಾರಿಗಳ ಹುದ್ದೆಗಳನ್ನು ಪಡೆದದ್ದು ಭಾರತೀಯ ವಾಯುಬಲದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆ. ಈ ವಿಮಾನ ಚಾಲಕಿಯರು ವಾಯುಬಲದ ಸಾರಿಗೆ ದಳದಲ್ಲಿ ಈಗ ಕರ್ತವ್ಯ ನಿರ್ವಹಿಸುತ್ತ್ತಿದ್ದಾರೆ.

	1999ರ ಮೇ, ಜೂನ್, ತಿಂಗಳುಗಳಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಬಲ ಸೇನಾಬಲಕ್ಕೆ ಬೆಂಬಲವಾಗಿ ನಡೆಸಿದ ಕಾರ್ಯಾಚರಣೆಗೆ “ಆಪರೇಷನ್ ಸಫೇದ್ ಸಾಗರ್” ಎಂದು ಹೆಸರಿಡಲಾಗಿತ್ತು. ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾಗೂ ಅತ್ಯಂತ ಕಿರಿದಾದ ಸ್ಥಳಗಳ ಮೇಲೆ ದಾಳಿ ಮಾಡಬೇಕಾಗಿದ್ದುದರ ಜೊತೆಗೆ ನಿಯಂತ್ರಣ ಗಡಿ ರೇಖೆಯನ್ನು ಯಾವ ಸಂದರ್ಭದಲ್ಲೂ ದಾಟಬಾರದೆಂಬ ಲಕ್ಷ್ಮಣ ರೇಖೆಯ ನಿರ್ಬಂಧ ಹಾಗೂ ಪ್ರತಿಕೂಲ ಹವಾಮಾನದ ಪರಿಸ್ಥಿತಿಗಳಲ್ಲಿ ವಾಯುಬಲ ಈ ಕಾರ್ಯಾಚರಣೆ ಕೈಗೊಳ್ಳಬೇಕಾಯಿತು. ಪರ್ವತ ಪ್ರದೇಶದಲ್ಲಿ ಯುದ್ಧವಿಮಾನಗಳ ಹಾರಾಟ ಕಠಿಣವಾದದ್ದು ಹಾಗೂ ದಾಳಿ ಮಾಡಬೇಕಾದ ಗುರಿಗಳ ಪತ್ತೆಯೂ ಕಷ್ಟ. ಬಹುತೇಕ ಪ್ರಕರಣಗಳಲ್ಲಿ ಕೆಲವು ಟೆಂಟ್‍ಗಳು ಮತ್ತು ಬಂಕರ್‍ಗಳೇ ಗುರಿಗಳಾಗಿದ್ದು, ಹಿಮ ಮತ್ತು ಶಿಲಾ ರಾಶಿಗಳ ನಡುವೆ ಮೇಲಿನಿಂದ ಇವು ಬಹಳ ಸಣ್ಣದಾಗಿ ಕಾಣುತ್ತಿದ್ದವು. ಹಾಗೂ ಗಂಟೆಗೆ ಸಾವಿರ ಕಿಲೋಮೀಟರ್ ವೇಗದಲ್ಲಿ ಚಲಿಸುವಾಗ ಇಂತಹ ಗುರಿಗಳ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸುವುದು ಎಷ್ಟು ಕಠಿಣ ಎಂಬುದನ್ನು ಯಾರಾದರೂ ಊಹಿಸಬಹುದು. ಇದಕ್ಕೆ ವಿರುದ್ಧವಾಗಿ ಶತ್ರು ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ವಿಮಾನಗಳ ಮೇಲೆ ಸುಲಭವಾಗಿ ಹಾರಿಸಬಹುದಾಗಿತ್ತು. ಕಾರ್ಯಾಚರಣೆಯಲ್ಲಿ ವಾಯುಬಲ ಎರಡು ಯುದ್ಧ ವಿಮಾನಗಳನ್ನು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಕಳೆದುಕೊಳ್ಳುವುದಕ್ಕೆ ಈ ಅಂಶವೇ ಕಾರಣವಾಯಿತು. ಸಫೇದ್ ಸಾಗರ್ ಕಾರ್ಯಾಚರಣೆಯ ಅಂಗವಾಗಿ ಭಾರತಿಯ ವಾಯುಬಲ ಮಿಗ್-21, ಮಿಗ್-23, ಮಿಗ್-27 ಮತ್ತು ಮಿರಾಜ್-2000 ಯುದ್ಧ ವಿಮಾನಗಳನ್ನು, ಎಂಐ-17 ಹೆಲಿಕಾಪ್ಟರ್‍ಗಳನ್ನೂ ದಾಳಿಯ ಉದ್ದೇಶಗಳಿಗೆ ಬಳಸಿದರೆ ಕ್ಯಾನ್‍ಬೆರ್ರಾ ಮತ್ತು ಜಾಗ್ವಾರ್ ವಿಮಾನಗಳನ್ನು ಗೂಢಚರ್ಯೆ ಮತ್ತು ಪೂರ್ವಾನ್ವೇಷಣೆ ಉದ್ದೇಶಗಳಿಗೆ ಬಳಸಲಾಯಿತು. ಭಾರತೀಯ ವಾಯುಬಲ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಒಟ್ಟು 1000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿತು. ವಾಯುಬಲದ ಹೆಲಿಕಾಪ್ಟರ್‍ಗಳು 400ಕ್ಕೂ ಹೆಚ್ಚು ಗಾಯಗೊಂಡ ಯೋಧರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು. ಹಾಗೂ ಸೇನಾ ತುಕಡಿಗಳನ್ನು ಭಾರೀ ತೂಕದ 105 ಮಿ.ಮೀ ಫಿರಂಗಿಗಳನ್ನು ವಾಯುಬಲದ ಸಾರಿಗೆ ವಿಮಾನಗಳು ಹೆಲಿಕಾಪ್ಟರ್‍ಗಳು ಅಗತ್ಯವಿದ್ದೆಡೆ ಸಾಗಿಸಿದವು. ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ಶತ್ರು ಅಲ್ಲಿಂದ ಪಲಾಯನ ಮಾಡುವುದಕ್ಕೆ ಸೇನಾಬಲಕ್ಕೆ ಸಕಾಲದಲ್ಲಿ ವಾಯುಬಲ ನೆರವಾಗಿದ್ದರಿಂದ ಶತ್ರುಗಳನ್ನು ನಮ್ಮ ನೆಲದಿಂದ ಓಡಿಸುವ ಕಾರ್ಯ ಕ್ಷಿಪ್ರವಾಗಿ ಮುಗಿಯಿತು.

	ರಷ್ಯ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನವಾದ ಎಸ್‍ಯು-30 ಕೆ ವಿಮಾನಗಳ ಮೊದಲ ತಂಡ ಭಾರತೀಯ ವಾಯುಬಲಕ್ಕೆ 1997 ರಲ್ಲಿ ಸೇರಿತು. ಹಾಗೂ ಎಸ್‍ಯು- 30 ಎಂಕೆಐ ಯುದ್ಧ ವಿಮಾನಗಳು 2002 ರಲ್ಲಿ ಸೇರ್ಪಡೆಯಾದವು. 2005 ರಿಂದ 2018ರ ವರೆಗೆ ಎಸ್ ಯು-30 ಎಂಕೆಐ ವಿಮಾನಗಳನ್ನು ಭಾರತದಲ್ಲಿ ತಯಾರಿಸುವ ಬಗ್ಗೆ ರಷ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಭಾರತೀಯ ವಾಯುಬಲದ ಯುದ್ಧ ವಿಮಾನಚಾಲಕರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡುವ ಸಲುವಾಗಿ ಬ್ರಿಟನ್ ತಯಾರಿಕೆಯ ಹಾಕ್ ಆಧುನಿಕ ಜೆಟ್ ತರಬೇತಿ ವಿಮಾನಗಳನ್ನು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ 2004 ಮಾರ್ಚ್ 26 ರಂದು ಸಹಿ ಹಾಕಲಾಯಿತು. ಒಟ್ಟು 66 ಹಾಕ್ ವಿಮಾನಗಳನ್ನು ಪಡೆದುಕೊಳ್ಳಲಾಗುವುದು ಹಾಗೂ ಈ ಪೈಕಿ 24 ವಿಮಾನಗಳನ್ನು ಇಡಿಯಾಗಿ ಪಡೆದುಕೊಳ್ಳಲಾಗುವುದು ಮತ್ತು ಉಳಿದ 42 ವಿಮಾನಗಳನ್ನು ಪರವಾನಗಿಯಡಿ ಭಾರತದಲ್ಲೇ ತಯಾರಿಸಲಾಗುವುದು. ಭಾರತದ ವಾಯುಬಲದ ಸಾಮಥ್ರ್ಯವನ್ನು ಹಲವು ಪಟ್ಟು ಹೆಚ್ಚಿಸುವುದಕ್ಕೆ ನೆರವಾಗುವ ನಾಲ್ಕು ಐಎಲ್-78 ಇಂಧನ ಪೂರೈಕೆ ವಿಮಾನಗಳನ್ನು ಪಡೆದುಕೊಳ್ಳಲಾಗಿದೆ. ಈ ವಿಮಾನಗಳಿಂದ ಎಸ್‍ಯು-30, ಎಸ್‍ಯು-30 ಎಂಕೆಐ, ಜಾಗ್ವಾರ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ಆಕಾಶದಲ್ಲೇ ಇಂಧನವನ್ನು ತುಂಬಿಕೊಳ್ಳಬಹುದು. ಐ ಎಲ್-78 ಟ್ಯಾಂಕರ್ ವಿಮಾನ ಮೂರು ಯುದ್ಧ ವಿಮಾನಗಳಿಗೆ ಏಕಕಾಲದಲ್ಲಿ ಇಂಧನವನ್ನು ತುಂಬಿಸಬಲ್ಲದು. ವೈಮಾನಿಕ ಮುನ್ನಚ್ಚರಿಕೆ ಮತ್ತು ನಿಯಂತ್ರಣಾ ವ್ಯವಸ್ಥೆಗಳನ್ನು (ಎವಾಕ್ಸ್) ಹೊಂದುವುದಕ್ಕೆ ಸಂಬಂಧಿಸಿದಂತೆ ಭಾರತ ಇಸ್ರೇಲ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಮೇರೆಗೆ ಮೂರು ಫಾಲ್ಕನ್ ಐವಾಕ್ ವ್ಯವಸ್ಥೆಗಳನ್ನು ಭಾರತೀಯ ವಾಯುಬಲ ಪಡೆದುಕೊಳ್ಳಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ಸಹಯೋಗದೊಂದಿಗೆ ಕ್ಯಾಬ್ಸ್ ಸಂಸ್ಥೆ (ಸೆಂಟರ್ ಫಾರ್ ಏರ್‍ಬೋರ್ನ್‍ಸಿಸ್ಟಮ್ಸ್) ಎರಡು ಎವಾಕ್ಸ್ ವ್ಯವಸ್ಥೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತ್ತಿದೆ.

	ಭಾರತದಲ್ಲೇ ತಯಾರಾಗುತ್ತಿರುವ ಹಗುರ ಯುದ್ಧ ವಿಮಾನ ತೇಜಸ್ ನ ಪರೀಕ್ಷಾರ್ಥ, ಪ್ರಯೋಗಾರ್ಥ ಹಾರಾಟಗಳು ಯಶಸ್ವಿಯಾಗಿ ನಡೆಯುತ್ತಿದೆ ಹಾಗೂ ಈ ವಿಮಾನಗಳ ಮೊದಲ ದಳ 2007 ರ ಹೊತ್ತಿಗೆ ವಾಯುಬಲಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಭಾರತೀಯ ವಾಯುಬಲ ಹೊಂದಿರುವ, ಫ್ರಾನ್ಸ್ ನಿರ್ಮಿತ ಹಳೆಯ ಚೇತಕ್ ಹೆಲಕಾಪ್ಟರ್‍ಗಳ ಸ್ಥಾನದಲ್ಲಿ ಬೆಂಗಳೂರಿನ ಹೆಚ್‍ಎಎಲ್ ಸಂಸ್ಥೆ ನಿರ್ಮಿಸುತ್ತಿರುವ ಆಧುನಿಕ ಹಗುರ ಹೆಲಿಕಾಪ್ಟರ್‍ಗಳನ್ನು ವಾಯುಬಲ ಈಗಾಗಲೇ ಪಡೆದುಕೊಳ್ಳಲಾರಂಭಿಸಿದೆ.

	ಮಿಗ್-21 ಬಿಐಎಸ್, ಜಾಗ್ವಾರ್ ಯುದ್ಧ ವಿಮಾನಗಳು, ಎಂಐ ಹೆಲಿಕಾಪ್ಟರ್‍ಗಳೂ ಸೇರಿದಂತೆ ವಾಯುಬಲದ ಅನೇಕ ವಿಮಾನಗಳು, ಹೆಲಿಕಾಪ್ಟರ್‍ಗಳೂ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ಸುಧಾರಣೆ, ಆಧುನೀಕರಣ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಹಳೆಯದಾಗಿರುವ ಮಿಗ್-21 ಮತ್ತು ಮಿಗ್ -23 ವಿಮಾನಗಳ ಸ್ಥಾನದಲ್ಲಿ ಅತ್ಯಾಧುನಿಕ ಹಾಗೂ ದಾಳಿ, ರಕ್ಷಣೆ ಮುಂತಾದ ವಿವಿಧ ಪಾತ್ರಗಳಲ್ಲಿ ಸಮರ್ಥವಾದ ಯುದ್ಧ ವಿಮಾನಗಳನ್ನು ವಾಯುಬಲಕ್ಕೆ ಪಡೆದುಕೊಳ್ಳುವ ಪ್ರಯತ್ನ ವಿಮಾನ ವ್ಯವಸ್ಥೆಗಳ ಪರೀಕ್ಷಾ ಸಂಸ್ಥೆ, ಕಾರ್ಯ ತಂತ್ರ ಮತ್ತು ವೈಮಾನಿಕ ಹೋರಾಟ ಅಭಿವೃದ್ಧಿ ಸಂಸ್ಥೆ ಹಾಗೂ ವೈಮಾನಿಕ ಹೋರಾಟ ಕಾಲೇಜ್ ಮತ್ತು ವೈಮಾನಿಕ ಸಂಶೋಧನಾ ಕೇಂದ್ರ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗಗಳು ಭಾರತೀಯ ವಾಯುಬಲಕ್ಕೆ ಸೇರಿರುವ ಇತರ ಸಂಸ್ಥೆಗಳಾಗಿವೆ.

“ಆಕಾಶವನ್ನು ಕೀರ್ತಿಯಿಂದ ಸ್ಪರ್ಶಿಸು” ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಭಾರತೀಯ ವಾಯುಬಲ ಇಂದು ಜಗತ್ತಿನ ನಾಲ್ಕನೇ ಅತಿ ದೊಡ್ಡ ಹಾಗೂ ಏಷ್ಯದ ಎರಡನೇ ಅತಿ ದೊಡ್ಡ ವಾಯುಬಲವಾಗಿದೆ. ಭಾರತದ ವಾಯು ಪ್ರದೇಶದ ರಕ್ಷಣೆ ಯುದ್ಧದ ಸಮಯದಲ್ಲಿ ದಾಳಿಗಳ ಕಾರ್ಯಾಚರಣೆ, ಸೈನ್ಯಕ್ಕೆ ನಿಕಟ ಬೆಂಬಲ ಯುದ್ಧ ಅಥವಾ ಶಾಂತಿಕಾಲದಲ್ಲಿ ಸೈನ್ಯದ ತುಕಡಿಗಳು ಮತ್ತು ಸರಬರಾಜುಗಳ ಸಾಗಣೆ, ಆಯಕಟ್ಟಿನ ಬೇಹುಗಾರಿಕೆ, ಮತ್ತು ಪೂರ್ವಾನ್ವೇಷಣೆ ಇವು ವಾಯುಬಲದ ಪ್ರಧಾನ ಪಾತ್ರಗಳಾಗಿವೆ.

ಭಾರತೀಯ ವಾಯುಬಲದ ನಿಯಂತ್ರಣ

	ಭಾರತೀಯ ವಾಯುಬಲದ ಪ್ರಧಾನ ಕಛೇರಿ ದೇಶದ ರಾಜಧಾನಿ ನವದೆಹಲಿಯಲ್ಲಿದ್ದು ವಾಯುುಬಲದ ಮುಖ್ಯಸ್ಥರು ಅದರ ಅತ್ಯುನ್ನತ ಅಧಿಕಾರಿಯಾಗಿರುತ್ತ್ತಾರೆ. ಅವರೆಂದರೆ ವಾಯುಬಲದ ಸಿಬ್ಬಂದಿಯ ಉಪಮುಖ್ಯಸ್ಥ, ವಾಯುಬಲದ ಸಿಬ್ಬಂದಿಯ ಡೆಪ್ಯುಟಿ ಮುಖ್ಯಸ್ಥ, ವಾಯುಬಲದ ಆಡಳಿತ ಮುಖ್ಯಸ್ಥ, ವಾಯುಬಲದ ನಿರ್ವಹಣೆಯ ಮುಖ್ಯಸ್ಥ, ವಾಯುಬಲದ ಸಿಬ್ಬಂದಿ ಮುಖ್ಯಸ್ಥ, ಹಾಗೂ ವಿಮಾನ ಹಾರಾಟ ಸುರಕ್ಷತೆ ಮತ್ತು ಪರಿಶೀಲನೆಯ ಇನಸ್ಪೆಕ್ಟರ್ ಜನರಲ್.
ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಒಟ್ಟು ಸಿಬ್ಬಂದಿ ಇರುವ ಭಾರತೀಯ ವಾಯುಬಲವನ್ನು ಸ್ಥೂಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. (ಅ) ಆಡಳಿತ, (ಆ) ಸರಬರಾಜು ವ್ಯವಸ್ಥೆ ಮತ್ತು ತರಬೇತಿ ಮತ್ತು (ಇ) ಹಾರಾಟ ವಿಭಾಗ ಭಾರತೀಯ ವಾಯುಬಲದ ಪಾತ್ರಗಳನ್ನು ಹೀಗೆ ವಿಂಗಡಿಸಬಹುದು.
ಅ) ವಾಯುಪ್ರದೇಶ ರಕ್ಷಣೆ, ಆ) ದಾಳಿ, ಇ) ತರಬೇತಿ, ಈ) ಬೇಹುಗಾರಿಕೆ, ಪೂರ್ವಾನ್ವೇಷಣೆ, ಉ) ಸಾರಿಗೆ, ಊ) 
ಹೆಲಿಕಾಪ್ಟರ್‍ಗಳು

ಭಾರತೀಯ ವಾಯುಬಲ ಒಟ್ಟು 7 ಅಧಿಪತ್ಯಗಳನ್ನು ಹೊಂದಿದೆ. ಪಶ್ಚಿಮ ವಾಯು ಅಧಿಪತ್ಯ, ನೈರುತ್ಯ ವಾಯು ಅಧಿಪತ್ಯ, ಪೂರ್ವ ವಾಯು ಅಧಿಪತ್ಯ, ಮಧ್ಯ ವಾಯು ಅಧಿಪತ್ಯ, ದಕ್ಷಿಣ ವಾಯು ಅಧಿಪತ್ಯ, ನಿರ್ವಹಣಾ ಅಧಿಪತ್ಯ, ಹಾಗೂ ತರಬೇತಿ ಅಧಿಪತ್ಯ. 

ದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುವ ಪಶ್ಚಿಮ ವಾಯು ಅಧಿಪತ್ಯ ಐದು ಪ್ರಾದೇಶಿಕ ಅಧಿಪತ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಹಾಗೂ ಅತ್ಯಂತ ಸೂಕ್ಷ್ಮವಾದದ್ದು. ರಾಜಧಾನಿ ದೆಹಲಿಯೂ ಸೇರಿದಂತೆ ಜೈಪುರದ ಉತ್ತರಕ್ಕೆ ಪಂಜಾಬ್‍ನಲ್ಲಿ ಹಾಗೂ ಕಾಶ್ಮೀರದಿಂದ ದಕ್ಷಿಣಕ್ಕೆ ರಾಜಾಸ್ಥಾನದ ವರೆಗೆ ವಾಯು ಕಾರ್ಯಾಚರಣೆಗಳನ್ನು ಈ ಅಧಿಪತ್ಯ ನಿಯಂತ್ರಿಸುತ್ತದೆ. 1982ರಲ್ಲಿ ಉಧಂಪುರದಲ್ಲಿ ಸ್ಥಾಪಿಸಲಾದ ವಾಯು ಕಾರ್ಯಾಚರಣೆಗಳ ತಂಡ ಲಡಾಕ್ ಸೇರಿದಂತೆ, ಜಮ್ಮು ಮತ್ತು ಕಾಶ್ಮೀರ ರಕ್ಷಣೆಗೆ ಮೀಸಲಾಗಿದೆ. ಆದಂಪುರ, ಅಂಬಾಲ, ಅವಂತಿಪುರ, ಚಂಡೀಘಡ, ಹಲ್ವಾರ್, ಹಿಂಡನ್, ಲೆಹ್, ಶ್ರೀನಗರ ಮತ್ತು ಪಠಾಣ್ ಕೋಟ್ ಸೇರಿದಂತೆ ಅನೇಕ ಖಾಯಂ ವಿಮಾನನೆಲಗಳನ್ನು ಹಾಗೂ ಮುಂಚೂಣಿ ನೆಲೆ ಬೆಂಬಲ ಘಟಕಗಳನ್ನು ಈ ಅಧಿಪತ್ಯ ಹೊಂದಿದೆ. ಇಲ್ಲಿ ಹಲವು ರೀತಿಯ ಮಿಗ್ ಯುದ್ಧ ವಿಮಾನಗಳ ಅನೇಕ ರೀತಿಯ ದಳಗಳನ್ನು ನೆಲೆಗೊಳಿಸಲಾಗಿದೆ.

	ಜೋಧ್‍ಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈರುತ್ಯ ವಾಯು ಅಧಿಪತ್ಯವನ್ನು 1980ರಲ್ಲಿ ಸ್ಥಾಪಿಸಲಾಯಿತು. ರಾಜಾಸ್ಥಾನದ ಬಹುತೇಕ ಪ್ರದೇಶದಲ್ಲಿ, ದಕ್ಷಿಣಕ್ಕೆ ಗುಜರಾತ್‍ನಿಂದ ಸೌರಾಷ್ಟ್ರ ಹಾಗೂ ಕಚ್‍ನಿಂದ ಪುಣೆಯವರೆಗಿನ ವಾಯು ಕಾರ್ಯಾಚರಣೆಗಳ ನಿಯಂತ್ರಣವನ್ನು ಈ ಅಧಿಪತ್ಯ ಹೊಂದಿದೆ. ಭುಜ್, ಜೈಸಲ್ಮೇರ್, ಜೋದ್‍ಪುರ್, ವಾಲಿಯ, ಬಾರ್ಮೇರ್ ಮತ್ತು ಪುಣೆಯಲ್ಲಿ ಖಾಯಂ ವಿಮಾನನೆಲೆಗಳನ್ನೂ ಅಹಮದಾಬಾದ್, ನಾಲೆ, ಸುರತ್‍ಗಢ್, ಮತ್ತು ಉತ್ತರಲೈನಲ್ಲಿ ಮುಂಚೂಣಿ ನೆಲೆ ಬೆಂಬಲ ಘಟಕಗಳನ್ನೂ ಅಧಿಪತ್ಯ ಹೊಂದಿದೆ. ಮಿಗ್-29, ಮಿಗ್-21, ಮಿಗ್-23, ಬಿಎನ್ ಹಾಗೂ ಕ್ಯಾನ್‍ಬೆರ್ರಾ ಮತ್ತು ಜಾಗ್ವಾರ್ ಯುದ್ಧ ವಿಮಾನಗಳ ಅನೇಕ ದಳಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ.
ಅಲಹಾಬಾದ್‍ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಮಧ್ಯ ವಾಯು ಅಧಿಪತ್ಯ ಗಂಗಾ ಪ್ರಸ್ಥಭೂಮಿಯ ಬಹುತೇಕ ಪ್ರದೇಶದಲ್ಲಿನ ದೆಹಲಿಯ ಪೂರ್ವಕ್ಕೆ ಬಹುತೇಕ ಬಂಗಾಲದವರೆಗಿನ ಹಾಗೂ ಬಹುತೇಕ ಸಂಪೂರ್ಣ ಮಧ್ಯ ಭಾರತದ ವಾಯು ಕಾರ್ಯಾಚರಣೆಗಳ ನಿಯಂತ್ರಣವನ್ನು ಹೊಂದಿದೆ. ದಕ್ಷಿಣ ವಾಯು ಅಧಿಪತ್ಯದ ಸ್ಥಾಪನೆಯ ಅನಂತರ ಈ ಅಧಿಪತ್ಯದ ಗಾತ್ರವನ್ನು ತಗ್ಗಿಸಲಾಯಿತು. ಮಧ್ಯ ವಾಯು ಅಧಿಪತ್ಯ ಇತರ ಅಧಿಪತ್ಯಗಳ ಜವಾಬ್ದಾರಿ ಕ್ಷೇತ್ರದಲ್ಲಿ ನೆಲಸಲಾಗಿರುವ ವಾಯುಬಲದ ಸಾರಿಗೆ ಘಟಕಗಳೂ ಸೇರಿದಂತೆ ವಾಯುಬಲದ ಬಹುತೇಕ ಸಾರಿಗೆ ಘಟಕಗಳನ್ನು ನಿಯಂತ್ರಿಸುತ್ತಿದೆ. ಮಿರಾಜ್-2000 ಹಾಗೂ ಮಿಗ್-21 ಯುದ್ಧ ವಿಮಾನಗಳ ದಳಗಳೂ ಸೇರಿದಂತೆ ಎಎನ್-32ಡಿ, ಎಲ್-76, ಡಾರ್ನಿಯರ್-228, ಸಾರಿಗೆ ವಿಮಾನಗಳ ಅನೇಕ ದಳಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಆಗ್ರ, ಬರೈಲಿ, ಗೋರಖ್‍ಪುರ್, ಅಲಹಾಬಾದ್, ನಾಗಪುರ್, ಕಾನ್ಪುರ್, ಗ್ವಾಲಿಯರ್ ಮತ್ತು ಬಕ್ಷಿ-ಕ-ತಲಾಬ್‍ನಲ್ಲಿ ಈ ಅಧಿಪತ್ಯದ ಖಾಯಂ ನೆಲೆಗಳಿವೆ.

	ಶಿಲ್ಲಾಂಗ್‍ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಪೂರ್ವ ವಾಯು ಅಧಿಪತ್ಯ ಕೋಲ್ಕತ್ತಾದ ವಾಯು ಪ್ರದೇಶದ ರಕ್ಷಣೆಯ ಜವಾಬ್ದಾರಿಯ ಜೊತೆಗೆ, ಪಶ್ಚಿಮ ಬಂಗಾಳ ಮಿಜೋರಾಂ, ಹಾಗೂ ಟಿಬೆಟ್, ಬಾಂಗ್ಲಾದೇಶ ಮತ್ತು ಮ್ಯಾನ್‍ಮಾರ್ (ಬರ್ಮಾ) ದೇಶಗಳ ಗಡಿಗಳಲ್ಲಿರುವ ಇತರ ರಾಜ್ಯಗಳ ರಕ್ಷಣೆಯ ಜವಾಬ್ದಾರಿಯನ್ನೂ ಹೊಂದಿದೆ. ದಂಗೆ ಕೋರರ ವಿರುದ್ಧ ಕಾರ್ಯಾಚರಣೆ ನಡೆಸುವುದು ಈ ಅಧಿಪತ್ಯದ ಮುಖ್ಯ ಗುರಿಯಾಗಿದ್ದು, ಮಿಗ್ ವಿಮಾನಗಳ ಕೆಲವು ದಳಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಕಲೈ ಕುಂಡ, ಬ್ಯಾರಕ್‍ಪೋರ್, ಬಾಗ್‍ಡೋಗ್ರಾದಲ್ಲಿ ಹಾಗೂ ಅಸ್ಸಾಂ, ಗೌಹಾತಿ, ತೇಜ್‍ಪುರ್, ಜೋರ್ಹಾಟ್, ಮತ್ತು ಛಬುವನಲ್ಲಿ  ಅಧಿಪತ್ಯ ಖಾಯಂ ನೆಲೆಗಳನ್ನು ಹೊಂದಿದೆ. ದಕ್ಷಿಣವಾಯು ಅಧಿಪತ್ಯ ತಿರುವನಂತಪುರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದ್ದು ಇದನ್ನು 1984 ರಲ್ಲಿ ಸ್ಥಾಪಿಸಲಾಯಿತು. ಭಾರತದ ದಕ್ಷಿಣದ ಪಾತ್ರಗಳು ಬಂಗಾಳಕೊಲ್ಲಿ, ಲಕ್ಷದ್ವೀಪಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ಅಧಿಪತ್ಯದ ಜವಾಬ್ದಾರಿಗೆ ಸೇರುತ್ತವೆ.

ತರಬೇತಿ ಅಧಿಪತ್ಯದ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಈ ಅಧಿಪತ್ಯದಡಿ ಅಲಹಾಬಾದ್, ಬೀದರ್, ದುಂಡಿಗಲ್, ಮತ್ತು ಹಕಿಂಪೇಟ್‍ನಲ್ಲಿ ವಾಯುಬಲದ ಅಕಾಡೆಮಿಯ ಕೇಂದ್ರಗಳೂ ತಾಂಬರಂನಲ್ಲಿ ವಿಮಾನಚಾಲಕರನ್ನು ತರಬೇತಿಗೊಳಿಸುವ ತರಬೇತುದಾರರ ಶಾಲೆಯೂ, ಹಕೀಂಪೇಟ್‍ನಲ್ಲಿ ಹೆಲಿಕಾಪ್ಟರ್ ತರಬೇತಿ ಶಾಲೆಯೂ, ತೇಜ್‍ಪುರ್‍ನಲ್ಲಿ ಮಿಗ್ ವಿಮಾನಗಳ ಹಾರಾಟ ತರಬೇತಿ ಕೇಂದ್ರವೂ, ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ಶಾಲೆ ಹಾಗೂ ಸಾರಿಗೆ ತರಬೇತಿ ವಿಭಾಗವೂ ಬೆಂಗಳೂರಿನಲ್ಲಿ ವಿಮಾನಗಳ ಪರೀಕ್ಷಾ ಚಾಲಕರ ಶಾಲೆಯೂ ಸೇರಿದಂತೆ ಅನೇಕ ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ.
ಮಧ್ಯ ಭಾರತದ ನಾಗಪುರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ನಿರ್ವಹಣಾ ಅಧಿಪತ್ಯ ವಾಯುಬಲದ ವಿಮಾನಗಳು ಮತ್ತಿತರ ಸಾಮಗ್ರಿಗಳ ದುರಸ್ತಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ.
ವಿಶ್ವ ಸಂಸ್ಥೆಯ ಕೋರಿಕೆಯ ಮೇರೆಗೆ 1961-63 ರಲ್ಲಿ ಕಾಂಗೋಬೈರ್‍ನಲ್ಲಿ, 1993-94 ರಲ್ಲಿ ಸೋಮಾಲಿಯಾದಲ್ಲಿ, 2000 ದ ವರ್ಷದಲ್ಲಿ ಪಿಯರ್ರಾಲಿಯೋನ್‍ನಲ್ಲಿ ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳೂ ಸೇರಿದಂತೆ ಭಾರತದ ವಾಯುಬಲ ದೇಶದ ಹೊರಗಡೆಯೂ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ.
ಪ್ರವಾಹ, ಬೂಕಂಪ, ಭೂಕುಸಿತ, ಮುಂತಾದ ಪ್ರಕೃತಿ ವಿಕೋಪಗಳು ದೇಶದಲ್ಲಿ ಸಂಭವಿಸಿದಾಗ ಶೋಧನೆ ಮತ್ತು ರಕ್ಷಣೆ ಕಾರ್ಯದಲ್ಲಿ ಭಾರತೀಯ ವಾಯುಬಲ ನೆರವಿಗಾಗಿ ಧಾವಿಸಿದೆ. 

ವಾಯುಬಲದ ವಿವಿಧ ದರ್ಜೆಗಳ ಹುದ್ದೆಗಳು ತುತ್ತತುದಿಯಿಂದ ತಳಮಟ್ಟದವರೆಗೆ ಹೀಗಿವೆ:

ಮಾರ್ಷಲ್ ಆಫ್ ಏರ್‍ಪೋರ್ಸ್
ಏರ್ ಛೀಫ್ ಮಾರ್ಷಲ್
ಏರ್ ಮಾರ್ಷಲ್
ಏರ್ ವೈಸ್ ಮಾರ್ಷಲ್
ಏರ್‍ಕಮ್ಯಾಡೋರ್ ಗ್ರೂಪ್ ಕ್ಯಾಪ್ಟನ್
ವಿಂಗ್ ಕಮ್ಯಾಂಡರ್
ಸ್ಕ್ವಾಡ್ರನ್ ಲೀಡರ್
ಫ್ಲೈಟ್ ಲೆಫ್ಟಿನೆಂಟ್
ಫ್ಲೈಯಿಂಗ್ ಆಫಿಸರ್

ವೈಮಾನಿಕರು
ಮಾಸ್ಟರ್ ವಾರಂಟ್ ಆಫೀಸರ್
ವಾರಂಟ್ ಆಫೀಸರ್
ಜೂನಿಯರ್ ವಾರಂಟ್ ಆಫೀಸರ್
ಸಾರ್ಜೆಂಟ್
ಕಾರ್ಪೊರಲ್
ಲೀಡಿಂಗ್ ಏರ್‍ಕ್ರಾಫ್ಟ್‍ಮನ್
ಏರ್‍ಕ್ರಾಫ್ಟ್‍ಮನ್

ಎಸ್‍ಯು-30 ಎಂ ಕೆ ಐ, ಎಸ್‍ಯು-30, ಮಿರಾಜ್-2000, ಹಲವು ರೀತಿಯ ಮಿಗ್, ಜಾಗ್ವಾರ್ ಮುಂತಾದ ಯುದ್ಧ ವಿಮಾನಗಳು, ಆಕಾಶದಲ್ಲೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸುವ ಟ್ಯಾಂಕರ್ ವಿಮಾನಗಳು ಹಾಗೂ ಎ ಎನ್-32, ಐಎಲ್-76, ಹೆಚ್‍ಎಎಲ್-228 ಹೆಚ್‍ಎಎಲ್-748 ಸಾರಿಗೆ ವಿಮಾನಗಳು ಸೇರಿದಂತೆ ಭಾರತೀಯ ವಾಯುಬಲ ಸುಮಾರು 40 ದಳಗಳನ್ನು (ಸ್ಕ್ವಾಡ್ರನ್-ಪ್ರತಿ ಸ್ಕ್ವಾಡ್ರನ್‍ನಲ್ಲಿ 12 ರಿಂದ 18 ವಿಮಾನಗಳಿರುತ್ತದೆ.) ಹೊಂದಿದೆ. ಎಂ.ಐ-24/32, ಎಂಐ35 ದಾಳಿ ಹೆಲಿಕಾಪ್ಟರ್‍ಗಳು, ಎಂಐ-8, ಎಂಐ-17, ಎಂಐ-26 ಸಾರಿಗೆ ಹೆಲಿಕಾಪ್ಟರ್‍ಗಳನ್ನು ಒಳಗೊಂಡ 20 ಹೆಲಿಕಾಪ್ಟರ್ ವಿಭಾಗಗಳಿವೆ. ತರಬೇತಿ ಮತ್ತು ಬೆಂಬಲದ ವಿಮಾನಗಳೂ, ಹೆಲಿಕಾಪ್ಟರ್‍ಗಳೂ ಸೇರಿ ಒಟ್ಟು ಸುಮಾರು 1700 ವಿಮಾನಗಳನ್ನೂ, ಹೆಲಿಕಾಪ್ಟರ್‍ಗಳನ್ನೂ ಹಾಗೂ ಆಕಾಶದಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳು, ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು, ಹಡಗುಗಳ ಮೇಲೆ ಪ್ರಯೋಗಿಸುವ, ಟ್ಯಾಂಕ್‍ಗಳ ವಿರುದ್ಧ ಬಳಸುವ ಭಾರಿ ಸಂಖ್ಯೆಯೆ ಕ್ಷಿಪಣಿಗಳಿಂದ ಸುಸಜ್ಜಿತವಾದ ಬಲಿಷ್ಟ ವಾಯುಬಲವಾಗಿದೆ ಭಾರತೀಯ ವಾಯುಬಲ.				

(ಬಿ.ಎನ್.ಗುರುಮೂರ್ತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ